ಹಿರೋಡಾಟಸ್
	ಕ್ರಿ.ಪೂ. 484-424. ಪ್ರಾಚೀನ ಗ್ರೀಕ್ ಇತಿಹಾಸಕಾರ. ಈತ ಗತಕಾಲದ ಘಟನೆಗಳ ಅಧ್ಯಯನ ಮತ್ತು ಅವಲೋಕನವನ್ನು ಇತಿಹಾಸವೆಂದು ಬಗೆದಿದ್ದ. ಇವನು ಇತಿಹಾಸದ ಪಿತಾಮಹನೆಂದು ಹೆಸರಾಗಿದ್ದಾನೆ. ಈತ ಏಷ್ಯಮೈನರ್‍ನ ದಕ್ಷಿಣ ಭಾಗದಲ್ಲಿರುವ ಹಾಲಿಕಾರ್‍ನಾಸಸ್ ಎಂಬ ಗ್ರೀಕ್ ವಸಾಹತು ನಗರದಲ್ಲಿ ಕ್ರಿ.ಪೂ ಸು. 484ರಲ್ಲಿ ಜನಿಸಿದ. ಇವನು ಯುವಕನಾಗಿದ್ದಾಗ ಸಾಹಿತ್ಯದಲ್ಲಿ ಶ್ರದ್ಧೆಯುಳ್ಳವನಾಗಿ ಇಟಲಿ, ಪೊನೀಷಿಯ, ಈಜಿಪ್ಟ್, ಲಿಬಿಯ, ಮೆಸಪೊಟೇಮಿಯ, ಅರೇಬಿಯ, ಸಿರಿಯ ಮುಂತಾದ ದೇಶಗಳಲ್ಲಿ ಸಂಚರಿಸಿ ವಿಪುಲ ಅನುಭವಪಡೆದ. ಈತ ಪ್ರತಿಯೊಂದು ವಿಷಯದಲ್ಲೂ ಕುತೂಹಲವುಳ್ಳವನಾಗಿದ್ದ. ತನಗೆ ತಿಳಿಯದ ವಿಷಯವನ್ನು ಇತರರಿಂದ ಕೇಳಿ ತಿಳಿದುಕೊಳ್ಳುತ್ತಿದ್ದ. ತಾನು ಸಂಚರಿಸಿದ ದೇಶಗಳ ಜನರ ಬಗೆಗೆ ಅಧ್ಯಯನ ನಡೆಸಿ ವಿಷಯ ಸಂಗ್ರಹಿಸಿದ. ಅಥೆನ್ಸ್‍ನ ದೊರೆ ಪೆರಕ್ಲಿಸ್‍ನಿಗೆ ಇವನ ಮೇಲೆ ವಿಶೇಷ ಅಭಿಮಾನವಿತ್ತು. ಈತ ಸು. 40ವರ್ಷ ವಯಸ್ಸಿನವನಾಗಿದ್ದಾಗ ಅಥೆನ್ಸ್‍ನಲ್ಲಿದ್ದ ಖ್ಯಾತ ನಾಟಕಕಾರ ಸಾಪೊಕ್ಲಿಸ್ ನನ್ನು ಭೇಟಿಯಾದ. 

	ಈತನ ಬರೆಹಗಳಲ್ಲಿ ಗ್ರೀಸ್ ದೇಶದ ನಗರಗಳ ಪ್ರಗತಿ, ಸಾಮ್ರಾಜ್ಯದ ಉದಯ, ಗ್ರೀಸಿನ ಮೇಲೆ ಪರ್ಷಿಯನ್ನರ ಆಕ್ರಮಣ, ಆಕ್ರಮಣಕಾರರನ್ನು ಎದುರಿಸಿದ ಗ್ರೀಕ್ ವೀರರ ಶೌರ್ಯದ ವರ್ಣನೆಗಳಿವೆ. ಇವುಗಳಲ್ಲಿ ಗ್ರೀಕ್ ಮತ್ತು ಪರ್ಷಿಯನ್ನರ ಸಮರ ದ್ವೇಷವನ್ನು ಪುರಾಣಕಾಲದವರೆಗೆ ಗುರುತಿಸಿದ್ದಾನೆ. ಇವನ ಬರೆಹಗಳು ಭೂಮಧ್ಯ ಮೆಡಿಟರೇನಿಯನ್ ಸಮುದ್ರದ ಪೂರ್ವಭಾಗದ ದೇಶಗಳ ಪ್ರಾಚೀನ ಇತಿಹಾಸಕ್ಕೆ ಮೂಲ ಆಕರಗಳಾಗಿವೆ.

	ಈತ ಒಂಬತ್ತು ಸಂಪುಟಗಳಲ್ಲಿ ಅನೇಕ ದೇಶಗಳ ಜನರ ನಡವಳಿಕೆ, ಧಾರ್ಮಿಕ, ಸಾಮಾಜಿಕ ನಂಬಿಕೆ, ಮೂಢನಂಬಿಕೆ, ಅಂಧಶ್ರದ್ಧೆ, ಪವಾಡಗಳಂಥ ಪ್ರತಿಯೊಂದು ವಿವರಗಳನ್ನು ವಿಶೇಷ ಗಮನವಿಟ್ಟು ಬರೆದಿದ್ದಾನೆ. ಪ್ರತಿಯೊಂದು ವಿಷಯವನ್ನೂ ಉತ್ಸಾಹದಿಂದ ವರ್ಣಿಸಿದ್ದಾನೆ. ಈತ ಪ್ರತಿಭಾಶಾಲಿ ಬರೆಹಗಾರ. ಗ್ರೀಸ್ ದೇಶದ ಪ್ರಖ್ಯಾತ ಯುದ್ಧ ಸಂಬಂಧೀ ಕಥೆಗಳಿಗೆ ಇವನ ಕೃತಿ ಅಮೂಲ್ಯ ಆಧಾರ ಗ್ರಂಥವಾಗಿದೆ.

	ಈತ ತಾನು ಕೇಳಿದ ದಂತಕಥೆಗಳನ್ನೆಲ್ಲ ಐತಿಹಾಸಿಕ ಘಟನೆಗಳೆಂದೇ ಭಾವಿಸಿ ಚಿತ್ರಿಸಿದ್ದಾನೆ. ಕೇಳಿದ್ದನ್ನೆಲ್ಲ ನಿಜವೆಂದು ಈತ ನಂಬುತ್ತಿದ್ದ. ಇದರಿಂದ ಕೆಲವರು ಇವನನ್ನು ಸುಳ್ಳುಗಳ ತಂದೆ ಎಂದೂ ಕರೆದಿದ್ದಾರೆ. ನೀತಿಬೋಧನೆಯ ಉದ್ದೇಶದಿಂದ ಈತ ಬರೆದಿದ್ದಾನೆ.

ಇವನು ತನ್ನ ಸಂಚಾರದಲ್ಲಿ ಅರಿತ ವಿಷಯಗಳನ್ನೆಲ್ಲ ಸೇರಿಸಿ ಸಮಕಾಲೀನ ಗ್ರೀಕರಿಗೆ ಪ್ರಪಂಚದ ಎಷ್ಟೋ ಭಾಗಗಳ ಪರಿಚಯ ಮಾಡಿಕೊಟ್ಟಿದ್ದಾನೆ. ಒಂದು ದೇಶದ ಗುಣದೋಷಗಳನ್ನು ನಿರೂಪಿಸಬಲ್ಲ ಶಕ್ತಿ ಇವನಿಗಿತ್ತು. ಈತ ವ್ಯಕ್ತಿ ಚಿತ್ರಣಗಳನ್ನು ಅದ್ಭುತವಾಗಿ ನಿರೂಪಿಸಿ ದ್ದಾನೆ. ಲಿಯೆನಿಡಾಸ್, ಅರಿಸ್ಪೈಡಿಸ್, ಕ್ರೈಸಸ್, ಇಂಥ ವ್ಯಕ್ತಿಗಳ ಚಿತ್ರಗಳನ್ನು ಮನೋಹರವಾದ ಸರಳ ಶೈಲಿಯಲ್ಲಿ ಆಕರ್ಷಕವಾಗಿ ಹೇಳಿದ್ದಾನೆ. ಅಲ್ಲದೆ ನುಡಿಚಿತ್ರಗಳಲ್ಲಿ ಈತನದು ಅಸಾಧಾರಣ ಕೌಶಲ. ಕೇಳಿಕೆಯ ಆಧಾರದ ಮೇಲೆ ಈತ ಬರೆದ ಕೆಲವು ವಿಚಾರಗಳು ದೋಷಪೂರಿತವಾಗಿವೆ. ಇಂತಹ ಸಂಗತಿಗಳನ್ನು ಅನಂತರದ ಇತಿಹಾಸಕಾರರು ಮತ್ತು ಪುರಾತತ್ತ್ವ ಶೋಧಕರು ಗುರುತಿಸಿದ್ದಾರೆ.

	ಈತ ತನ್ನ ಸ್ವಾರಸ್ಯಕರವಾದ ವಿಷಯಗಳನ್ನು ಅಥೆನ್ಸ್ ಮತ್ತು ಒಲಂಪಿಯ ನಗರಗಳಲ್ಲಿ ಸಾರ್ವಜನಿಕರ ಮುಂದೆ ಓದಿ ಹೇಳುತ್ತಿದ್ದ. ಇವನ ವರ್ಣನೆಗಳನ್ನು ಕೇಳಿ ಉತ್ತೇಜಿತರಾದ ಗ್ರೀಸಿನ ಜನರು ಇವನಿಗೆ ನಿಧಿ ಅರ್ಪಿಸುತ್ತಿದ್ದರು.

	ಗತಕಾಲದ ಘಟನೆಗಳನ್ನು ಬರೆವಣಿಗೆಯಲ್ಲಿ ದಾಖಲಿಸಿ ಈತ ಇತಿಹಾಸ ರಚನೆಯ ಜನಕನೆಂದು ಹೆಸರಾಗಿದ್ದಾನೆ. ಇವನ ಇತಿಹಾಸ ಸಂಪುಟಗಳಲ್ಲಿ ರಾಜಕೀಯ, ಸಾಮಾಜಿಕ, ಭೌಗೋಲಿಕ ಮುಂತಾದ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ. ಸಾಹಿತ್ಯ, ವಿಜ್ಞಾನ, ಕಲೆ, ತತ್ತ್ವಶಾಸ್ತ್ರ ಎಲ್ಲವೂ ಇವನ ಬರೆವಣಿಗೆಯ ವಸ್ತುವಾಗಿದೆ. ಸಮಾಜ, ಉಡುಪು, ಶಿಷ್ಟಾಚಾರ, ನೀತಿ, ನಂಬಿಕೆ ಮುಂತಾದವನ್ನೂ ಪ್ರಸ್ತಾಪಿಸಿದ್ದಾನೆ. ಇವನ ಕೃತಿಗಳು ಪ್ರಾಚೀನ ಗ್ರೀಕರ ಐತಿಹ್ಯದ ಅಮೂಲ್ಯ ಭಂಡಾರವಾಗಿವೆ.

	(ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ